ಡಯೊರೈಟ್
ಆಳಜನಿತ ಪ್ರತ್ಯಾಮ್ಲೀಯ ಅಗ್ನಿಶಿಲೆ. ಕಪ್ಪುಬಣ್ಣದ, ಭಾರವಾದ ಕಬ್ಬಿಣ ಮತ್ತು ಮೆಗ್ನೀಸಿಯಮ್‍ಯುಕ್ತ ಖನಿಜಗಳು ಇದರಲ್ಲಿ ಹೇರಳವಾಗಿವೆ. ಸಾಮಾನ್ಯವಾಗಿ ಮಬ್ಬಾದ ವಿವಿಧ ಛಾಯೆ ಮತ್ತು ಹೆಚ್ಚಿನ ಸಾಂದ್ರತೆಯುಳ್ಳದ್ದು. ಶಿಲೆಯ ಅನಂತರ (ಕಣ) ರಚನೆ ಸ್ಫಟಿಕಾಕಾರದ್ದು. ಬರೀ ಕಣ್ಣಿನಿಂದ ಇಲ್ಲವೆ ಮಸೂರದ ಮೂಲಕ ನೋಡಿದಾಗ ವಿವಿಧ ಖನಿಜಗಳ ಹರಳುಗಳು ಕಾಣುತ್ತವೆ. ಅನೇಕ ವೇಳೆ ಬೂದು ಮತ್ತು ಮಬ್ಬಾದ ಬೂದು ಬಣ್ಣದಲ್ಲಿಯೂ ಇದು ದೊರೆಯುತ್ತದೆ. ಇದರಲ್ಲಿರುವ ಪ್ರಮುಖ ಖನಿಜಗಳೆಂದರೆ ಪ್ಲೇಬಿಯೋಕ್ಲೇಸ್ ಫೆಲ್ಸ್‍ಪಾರ್, ಕಂದುಬಣ್ಣದ ಮೈಕಾ ಮತ್ತು ಹಸಿರು ಅಥವಾ ಕಂದು ಹಾರ್ನ್‍ಬ್ಲೆಂಡ್. ಅನೇಕವೇಳೆ ಬೆಣಚು (ಕ್ವಾಟ್ರ್ಸ್) ಕೂಡ ಇರಬಹುದು. ಇಂಥ ಡಯೊರೈಟನ್ನು ಕ್ವಾಟ್ರ್ಸ್‍ಡಯೊರೈಟ್ ಎನ್ನಬಹುದು.

ಒತ್ತಾಗಿರುವ ಸೂಕ್ಷ್ಮ ಕಣಗಳ ಡಯೊರೈಟಿನ ಮಾತೃಕೆಯಲ್ಲಿ ಕೆಲವು ಸಲ ಫೆಲ್ಸ್‍ಪಾರಿನ ದೊಡ್ಡ ದೊಡ್ಡ ಹರಳುಗಳಿರುತ್ತವೆ. ಇಂಥವನ್ನು ಡಯೊರೈಟ್ ಪಾರ್‍ಫಿರಿ ಎಂದು ಕರೆಯುತ್ತಾರೆ. ಡಯೊಟೈಟ್ ಯಾವಾಗಲೂ ಕಣಶಿಲೆಯ ಗ್ರಾನೈಟ್ ಜೊತೆಯಲ್ಲಿ ಛಾಯಾಂತರ ವಿಧದಲ್ಲಿಯೂ ದೊಡ್ಡ ದೊಡ್ಡ ಪರ್ವತ ಶ್ರೇಣಿಗಳ ಗರ್ಭದಲ್ಲಿಯೂ ಹೆಚ್ಚಾಗಿ ಸಿಗುತ್ತದೆ. ಗ್ರಾನೈಟ್ ಶಿಲೆಯ ಮಾದರಿಯಲ್ಲಿ ಇದು ಡೈಕು, ಸಿಲ್ ಮುಂತಾದ ರೂಪಗಳಲ್ಲಿ ದೊರೆಯುತ್ತದೆ. ಇದನ್ನು ಕಟ್ಟಡ ಶಿಲೆಯಾಗಿ ಉಪಯೋಗಿಸುವುದಿದೆ.
(ಟಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ